ಅದ್ಯಾತ್ಮಿಕ ಅನುಭವದ ಪ್ರಾರಂಭಿಕ ದಿನಗಳಲ್ಲಿ ತನ್ನ ಸುತ್ತ ಘಟಿಸುತ್ತಿದ್ದಂತಹ ಆಗು-ಹೋಗುಗಳು ಶ್ರೀ ಸ್ವಾಮಿಯವರಿಗೆ ಅಪಥ್ಯವಾಗಿದ್ದವು. ಮಹಾ ತಾಯಿಗೆ ಅವರ ಒಂದೇ ಒಂದು ಪ್ರಾರ್ಥನೆ ಏನೆಂದರೆ, ಓ ಎನ್ನ ತಾಯೇ! ನೀ ಎಂತಹ ಗುರುತರವಾದ ಜವಾಬ್ದಾರಿಯನ್ನು ನನ್ನ ಮೇಲೆ ಹೊರಿಸಿರುವೆ? ಸಂಕಷ್ಟದಲ್ಲಿರುವ ಜನಮಾನಸದ ತುಡಿತಕ್ಕೆ ಪ್ರತಿಯಾಗಿ ಕಷ್ಟನಿವಾರಕಳಾಗಿ ಮುಂದಾಗುವ ನೀನು ನನ್ನನ್ನು ಉಪಾದಿಯಾಗಿ ಮಾಡಿಕೋ ತಾಯಿ. ತೇದಿ-ತೇದಿ ಕೊರಡು ಕೊನರಾದಂತೆ, ಜನರ ಜೀವನವ ಹಸನುಗೊಳಿಸುವ ಆ ಮಹಾ ಕಾರ್ಯದಲ್ಲಿ ನನ್ನನ್ನು ಅಳವಡಿಸಿಕೋ ಅಬ್ಬೇ.
ಅದೇ ದಿನ ಯಾರು ಕೂಡಾ ತನ್ನ ಕ್ಷೇತ್ರದಲ್ಲಿ ಕಾಣಿಕೆ ಹಾಕದಂತೆ ಸೂಚನಾಫಲಕ ಹಾಕಿಸಿದರು. ಪಶ್ಚಾತ್ತಾಪದ ಕಣ್ಣೀರು ಹಾಗೂ ಆದ್ಯಾತ್ಮಿಕ ಸಂಪನ್ನತೆಯ ಆವಿಷ್ಕಾರದಲ್ಲಿನ ಬೆವರಹನಿಯ ತರ್ಪಣ – ಇವೇ ತಾಯಿ ಪರಾಶಕ್ತಿಯು ಭಕ್ತರಿಂದ ಆಶಿಸುವ ಕಾಣಿಕೆ. ಇದರ ಜತೆಗೆ, ತಾಳ್ಮೆ, ಪೂರ್ಣ ಶರಣಾಗತಿಸಹಿತವಾದ, ಜಾಗತಿಕ ಪುನ:ಶ್ಚೇತನಕಾರಿಯಾದ ಸಾಮೂಹಿಕ ಪ್ರಾರ್ಥನೆಯ ಸಲ್ಲಿಕೆ ಆಗಬೇಕು ಆ ತಾಯಿಗೆ. ಇವೇ ಆಕೆಯ ಭಕ್ತಿಯ ಮಾನದಂಡಗಳು. ಪ್ರಾಯಶ: ‘ಕಾಣಿಕೆ’ ಎನ್ನುವ ಶಬ್ದದ ಸಾರ್ವತ್ರಿಕ ಕಲ್ಪನೆಗೆ ವಿರೋಧಾಭಾಸವಾಗಿ ವಿಶ್ಲೇಷಣೆಯಾಗುವಂತಹ ಕ್ಷೇತ್ರವೆಂದರೆ ಇದೊಂದೇ ಇರಬಹುದು.
ಆದರೂ, ಭಕ್ತಾದಿಗಳು ಪೂಜೆಗೆ ಬೇಕಾದ ವಸ್ತುಗಳು, ಅನ್ನದಾನಕ್ಕೆ ಬೇಕಾದಂತಹ ಅಕ್ಕಿ, ತರಕಾರಿ, ಬೇಳೆ-ಕಾಳುಗಳನ್ನು ಸ್ವಯಪ್ರೇರಿತರಾಗಿ ತಂದೊಪ್ಪಿಸುತ್ತಾರೆ. ಕಾರ್ಯಕರ್ತರೇ ಅಡುಗೆ ತಯಾರಿಸಿ, ಸಹಭೋಜನದಲ್ಲಿ ನೆರವಾಗುತ್ತಾರೆ. ಹೀಗೆ, ಶ್ರೀ ಕ್ಷೇತ್ರದಲ್ಲಿ ಎಲ್ಲವೂ ಹಣಕಾಸಿನ ವ್ಯವಹಾರವಿಲ್ಲದೆ, ಶ್ರೀ ಪರಾಶಕ್ತಿಯ ಕೃಪಾಕಟಾಕ್ಷದೊಂದಿಗೆ ಸಾಂಗವವಾಗಿ ಜರಗುತ್ತವೆ.