ಉಪೋದ್ಘಾತ

“ಭರತವರ್ಷ”ವೆಂದು ನಾಮಾಂಕಿತವಾದ ನಮ್ಮ ದೇಶವು ಇಡೀ ವಿಶ್ವ್ಯದಲ್ಲೇ ವಿಶೇಷವಾದ ಸ್ಠಾನವನ್ನು ಪಡೆದಿದ್ದು, ಆತ್ಮೋನ್ನತಿಯ ಅನ್ವೇಷಣೆಯಲ್ಲಿರುವ ಭಕ್ತಜನಮಾನಸದ ದೃಷ್ಟಿಯಲ್ಲಿ ಪ್ರಶಾಂತತೆಯ ಮೂಲ ಪರಿಕಲ್ಪನೆಗೆ ಅನ್ವರ್ಥಕವಾಗಿದೆ. ಋಷಿಪುಂಗವರ ಅವಿಶ್ರಾಂತ ತಪಶ್ಚರ್ಯೆಯ ಫಲವಾಗಿ ಈ ಭೂಮಿಯು ದೈವೀಕ ಅನುಭಾವದಿಂದ ಸಿಂಚಿತವಾಗಿದ್ದು ಪಾವಿತ್ರ್ಯತೆಯನ್ನು ಹೊಂದಿದೆ.
ಇಂತಹ ಪುಣ್ಯಭೂಮಿಯ ಭಾಗವಾಗಿರುವ ಮಂಗಳೂರಿನ ಮರಕಡ ಶ್ರೀ ಪರಾಶಕ್ತಿ ಕ್ಷೇತ್ರವು ಒಂದು ವಿಶಿಷ್ಟ ತಾಣವಾಗಿದ್ದು, ಮಹಾತಾಯಿ ಪರಾಶಕ್ತಿಯು ಗೌರವಾನ್ವಿತ ಶ್ರೀ ನರೇಂದ್ರನಾಥ ಯೋಗೇಶ್ವರರನ್ನು ಉಪಾದಿಯಾಗಿಸಿ ಭಕ್ತಾದಿಗಳಿಗೆ ಅಭಯಪ್ರದಾನವೀಯುತ್ತಿರುವಳು. ಶ್ರೀ ಪರಾಶಕ್ತಿ ಕ್ಷೇತ್ರವು ಸಮಸ್ತ ಸ್ತರಗಳ ಜನರನ್ನು ಆಕರ್ಷಿಸುತ್ತಿದ್ದು ಸಮರಸ ಸಮಭಾವವೇ ತುಂಬಿತುಳುಕುವ ಜನಸಾಗರವನ್ನು ಸೃಷ್ಠಿಸುತ್ತಿದೆ ಹಾಗೂ ಆತ್ಮ-ಆಂತರ್ಯದ ಮಟ್ಟದಲ್ಲಿ ಶುದ್ಧೀಕೃತಗೊಳಿಸಿ, ಕೃತಾರ್ಥತೆಯ ಭಾವವನ್ನು ಮೂಡಿಸುತ್ತಿದೆ.